ಪರಿವರ್ತನೆ
ಇಂದಿನದು ಯಾಂತ್ರಿಕ ಯುಗವೇ ಇರಬಹುದು. ಆದರೂ, ಭಾವಗಳ ಅಭಿವ್ಯಕ್ತಿ, ಸುಲಭ ಮತ್ತು ಅತಿ ಶೀಘ್ರ! ಇದು ಸಾಧ್ಯವಾಗಿರುವುದು, ಜಾಣಸಂಚಾರಿ ದೂರವಾಣಿಗಳ (ಸ್ಮಾರ್ಟ್ ಮೊಬೈಲ್ ಪೋನ್)
ಆಶೀರ್ವಾದದಿಂದ! ಭಾವನೆಗಳನ್ನು ಪ್ರತಿಬಿಂಬಿಸುವುದು ಅತಿ ಸುಲಭ! ಬೆರಳಂಚಿನಲ್ಲಿನ ಎಮೋಟಿಕಾನುಗಳು, ಪದಗಳನ್ನೂ ಮೀರಿದ ಕೆಲಸ ನಿರ್ವಹಿಸುತ್ತಿವೆ.
ನಗುವೋ, ನಾಚಿಕೆಯೋ, ಕೋಪವೋ, ಬೇಸರವೋ, ಮುಗುಳ್ನಗೆಯೋ, ಮುಜುಗರವೋ, ಅಂಜಿಕೆಯೋ, ಯೋಚನೆಯೋ, ಭಯವೊ, ಭಕ್ತಿಯೋ, ಪ್ರೀತಿಯೋ ಇಲ್ಲ ನಿರಾಶೆಯೋ, ಅಥವಾ ಇದ್ಯಾವುದೆಂದು ವಿವರಿಸಲಾಗದ ನೀರವ ಮೌನವೋ, ಎಲ್ಲವೂ ಬೆರಳಂಚಿನ ಮಾಯಾಜಾಲದಲ್ಲಿ ಸುಲಭ ಪ್ರಸವ!
ಪ್ರತಿ ವರ್ಷವೂ ಯುಗಾದಿ, ದೀಪಾವಳಿ, ದಸರೆಗೆ ಬಂಧುಮಿತ್ರರೆಲ್ಲಾ ಸೇರುವುದಿತ್ತು.
ಕಡೆಯಪಕ್ಷ ಹುಟ್ಟುಹಬ್ಬಗಳಲ್ಲಿ ಹಾರೈಕೆ, ಆಶೀರ್ವಾದ ಪಡೆಯುವ ವಾಡಿಕೆಯಿತ್ತು. ನಿಧಾನವಾಗಿ ಪತ್ರಗಳು, ಹಾರೈಕಾ ಪತ್ರಗಳ ಬದಲಾವಣೆ ಪ್ರಾರಂಭವಾಯಿತು. ನಂತರದ
ದಿನಗಳನ್ನು ದೂರವಾಣಿ ಸಂದೇಶಗಳು ಆಳಿದರೂ, ವಿದ್ಯುತ್ ಅಂಚೆಗಳು ಆಧುನಿಕ ಪತ್ರವ್ಯವಹಾರಕ್ಕೆ ನಾಂದಿಹಾಡಿತು.
ಇಂದಿನ ಯುಗದಲ್ಲಿ ಸಂಚಾರಿ ದೂರವಾಣಿಗಳು ತಮ್ಮ
ಜಾಣತನದಿಂದ ಜಗತ್ತನ್ನೇ ದಡ್ಡರನ್ನಾಗಿಸಿದೆ. ಹಬ್ಬ ಹರಿದಿನಗಳು, ಪತ್ರವ್ಯವಹಾರಗಳಿರಲಿ, ದೂರವಾಣಿ ಕರೆಗಳು, ಕ್ಷೇಮ ವಿಚಾರಿಸುವುದಿರಲಿ, ಎಲ್ಲವೂ ಅಂಗೈಯಗಲದ ಪರದೆಯ ಮೇಲೆ! ಎಲ್ಲಾ
ಭಾವನೆಗಳನ್ನು ಬೆರಳುಗಳಿಂದ ಸ್ಪರ್ಶಿಸುತ್ತಾ ಕಳುಹಿಸಬೇಕಾದವರಿಗೆಲ್ಲಾ ಕಳುಹಿಸಿದರೆ, ಭಾವನೆಗಳು ಪಕ್ಕದಲ್ಲಿರುವವರಿಗೂ, ದೂರದೂರಿನಲ್ಲಿರುವವರಿಗೂ, ಸಪ್ತಸಾಗರದಾಚೆಯಲ್ಲಿರುವವರಿಗೂ, ಕ್ಷಣಾರ್ಧದಲ್ಲೆ ಮುಟ್ಟುತ್ತದೆ.
ಆದರೆ, ಈ ಭಾವನೆಗಳ ಸ್ವೀಕರ್ತ, ಅವುಗಳನ್ನು ಅರ್ಥೈಸಿಕೊಳ್ಳುವನೋ, ಅವುಗಳಿಗೆ ಸ್ಪಂದಿಸುವನೋ, ಅಥವಾ ಸಂದೇಶವೊಂದನ್ನು ಹಿಂದಿರುಗಿಸುವುದರ ಮೂಲಕ
ತನ್ನ ಇರುವಿಕೆಯ ನಂಬಿಸುವನೋ, ಗೊತ್ತಿಲ್ಲದ ವಿಷಯ:
ಪರಿವರ್ತನೆ ಜಗದ ನಿಯಮ!
ಕೃಷ್ಣೆ!








